ಮಾಲ್ತಸ್, ತಾಮಸ್ ರಾಬರ್ಟ್
1766-1834. ಪ್ರಸಿದ್ಧ ಅರ್ಥಶಾಸ್ತ್ರಜ್ಞ. ಕೇಂಬ್ರಿಜ್ ಅರ್ಥಶಾಸ್ತ್ರಜ್ಞರಲ್ಲಿ ಮೊದಲಿಗನೆನಿಸಿದ ಈತ ಜನಸಂಖ್ಯಾ ಸಿದ್ಧಾಂತದಿಂದ ಹೆಚ್ಚು ಪ್ರಖ್ಯಾತ. ಇಂಗ್ಲೆಂಡಿನ ಸರ್ರೆ ಕೌಂಟಿಗೆ ಸೇರಿದ ಡಾರ್‍ಕಿನ್ ಬಳಿ 1766 ಫೆಬ್ರವರಿ 14ರಂದು ಈತನ ಜನನ. ತಂದೆ ಡೇನಿಯಲ್ ಮಾಲ್ತಸ್. ಈತ ಫ್ರಾನ್ಸಿನ ಎನ್‍ಸೈಕ್ಲೊಪೀಡಿಸ್ಟರೊಂದಿಗೆ ನಿಕಟ ಸಂಬಂಧ ಹೊಂದಿದ್ದ. ಅವರ ತತ್ತ್ವಗಳಲ್ಲಿ ಆತನಿಗೆ ದೃಢವಾದ ನಂಬಿಕೆಯಿತ್ತು. ಮಾಲ್ತಸ್ ಕೇಂಬ್ರಿಜ್‍ನ ಜೀಸಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಪರೀಕ್ಷೆಯಲ್ಲಿ ಉನ್ನತ ಸ್ಥಾನ ಗಳಿಸಿದ. 1793ರಲ್ಲಿ ಪ್ರೌಢವಿದ್ಯಾಶಾಲಾ ಮಂಡಲಿಯ ಸದಸ್ಯಸ್ಥಾನ ಪಡೆದ. 1799ರಲ್ಲಿ ದೀಕ್ಷೆ ಪಡೆದು ಸರ್ರೆಯ ಆಲ್‍ಬರಿ ಎಂಬಲ್ಲಿ ಕೆಲವು ಕಾಲ ಸಹಾಯಕ ಪಾದ್ರಿಯಾಗಿ ಕೆಲಸ ಮಾಡಿದ. ಮಾಲ್ತಸನಿಗೆ 1805ರಲ್ಲಿ ವಿವಾಹವಾಯಿತು. ಅದೇ ವರ್ಷ ಈಸ್ಟ್ ಇಂಡಿಯಾ ಕಂಪನಿಯ ಹೇಲ್‍ಬರಿ ಕಾಲೇಜಿನಲ್ಲಿ ಆಧುನಿಕ ಇತಿಹಾಸ ಅರ್ಥಶಾಸ್ತ್ರಗಳ ಪ್ರಾಧ್ಯಾಪಕನಾಗಿ ನೇಮಕಗೊಂಡ.

	ಮಾಲ್ತಸನ ಹೆಸರು ಆತ ನಿರೂಪಿಸಿದ ಜನಸಂಖ್ಯಾ ಸಿದ್ಧಾಂತದಿಂದ ಪ್ರಸಿದ್ಧಿ ಪಡೆಯಿತು. 19ನೆಯ ಶತಮಾನದ ಆದಿಭಾಗದಲ್ಲಿ ವೈಜ್ಞಾನಿಕ ಯಾಂತ್ರಿಕ ಅಭಿವೃದ್ಧಿಗಳ ಪ್ರಭಾವಕ್ಕೊಳಗಾಗಿ ಸಮಾಜದ ಅಭಿವೃದ್ಧಿ ಸುಖಸಾಧನೆಗಳ ವಿಚಾರದಲ್ಲಿ ಆಶಾವಾದಿಗಳಾಗಿದ್ದವರಲ್ಲಿ ಇವನ ತಂದೆಯೂ ಒಬ್ಬ. ಆದರೆ ಮಾಲ್ತಸ್ ತಂದೆಯ ಅಭಿಪ್ರಾಯವನ್ನು ಒಪ್ಪಲಿಲ್ಲ. ತಂದೆ ಮಕ್ಕಳಿಗೆ ಭಿನ್ನಾಭಿಪ್ರಾಯಗಳಿದ್ದಾಗ್ಯೂ ತಂದೆ ಮಗನ ಅಭಿಪ್ರಾಯಗಳನ್ನು ಗೌರವಿಸಿ, ಆ ಅಭಿಪ್ರಾಯಗಳ ಪ್ರಕಟಣೆಗೆ ಅನುಮತಿ ಇತ್ತ. ಜನಸಂಖ್ಯೆಯನ್ನು ಕುರಿತು ಮಾಲ್ತಸ್ ರಚಿಸಿದ ಪ್ರಬಂಧ ಪ್ರಕಟವಾಯಿತು. ಈ ಪ್ರಬಂಧವನ್ನು ಮಾಲ್ತಸ್ 1798ರಲ್ಲಿ ಬೇರೆ ಹೆಸರಿನಲ್ಲಿ ಪ್ರಕಟಿಸಿದ. ಮಾಲ್ತಸ್‍ನ ಅಭಿಪ್ರಾಯದಲ್ಲಿ ಜನಸಂಖ್ಯಾ ಬೆಳೆವಣಿಗೆ ಮನುಷ್ಯನ ಸುಖಕ್ಕಿರುವ ಮುಖ್ಯ ಅಡಚಣೆ. ಪ್ರಕೃತಿಯ ಔದಾರ್ಯಕ್ಕೆ ಮಿತಿ ಇರುತ್ತದೆ. ವಿಜ್ಞಾನ ಮತ್ತು ತಾಂತ್ರಿಕ ಬೆಳೆವಣಿಗೆ ನೆರವಿನಿಂದ ಭೂಮಿಯಿಂದ ಮಿತಿಮೀರಿದ ಫಲ ಪಡೆಯಲು ಸಾಧ್ಯವಾಗುವುದಿಲ್ಲ. ಯಾವಾಗಲೂ ಆಹಾರೋತ್ಪನ್ನದ ಅಭಿವೃದ್ಧಿ ಜನಸಂಖ್ಯಾಭಿವೃದ್ಧಿಗಿಂತ ಕಮ್ಮಿಯಾಗಿರುತ್ತದೆ. ಆಹಾರೋತ್ಪನ್ನದ ಅಭಿವೃದ್ಧಿ ಗಣಿತ ಶ್ರೇಣಿಯಲ್ಲಾಗುತ್ತದೆ. ಉದಾಹರಣೆಗೆ 5, 10, 15, 20, 25... ಆದರೆ ಜನಸಂಖ್ಯಾ ಬೆಳೆವಣಿಗೆ ಜ್ಯಾಮಿತಿಯ ಸಂಖ್ಯಾಶ್ರೇಣಿಯಲ್ಲಾಗುತ್ತದೆ. ಉದಾಹರಣೆಗೆ 5, 10, 20, 40...ಆದುದರಿಂದ ಸಮಾಜದಲ್ಲಿ ಯಾವಾಗಲೂ ಜನಸಂಖ್ಯೆ ಆಹಾರೋತ್ಪನ್ನದ ಮಿತಿಗಿಂತಲೂ ಹೆಚ್ಚಾಗಿರುತ್ತದೆ. ಇದು ಸಸ್ಯ ಪ್ರಾಣಿವರ್ಗಗಳಲ್ಲಿರುವ ವಾಸ್ತವಿಕಸ್ಥಿತಿ. ಒಟ್ಟಿನಲ್ಲಿ ಭೌಗೋಳಿಕ ಸನ್ನಿವೇಶ ಮನುಷ್ಯನ ಜೀವನ ಅಭಿವೃದ್ಧಿಗಳ ಮೇಲೆ ಮುಖ್ಯ ಪರಿಣಾಮಕಾರಿಯಾಗುತ್ತದೆ. ಸಮಾಜದಲ್ಲಿ ಪ್ರಕೃತಿ ತನ್ನದೇ ಆದ ಮಾರ್ಗದಲ್ಲಿ ಯಾವಾಗಲೂ ಜನಸಂಖ್ಯೆಯನ್ನು ಮಿತಿಗೊಳಿಸುತ್ತದೆ. ಅದನ್ನು ಮಾಲ್ತಸ್, ಪ್ರಕೃತಿ ನಿಯಂತ್ರಣ ಕಾರ್ಯ ಎಂದು ಕರೆದ. ಪ್ರಕೃತಿಯ ನಿಯಮಗಳು ನಿರ್ದಾಕ್ಷಿಣ್ಯವಾಗಿ ವರ್ತಿಸುತ್ತವೆ. ಕಾಯಿಲೆ, ಸಾಂಕ್ರಾಮಿಕರೋಗ, ಕ್ಷಾಮ, ಯುದ್ಧ ಮೊದಲಾದವು ಪ್ರಕೃತಿ ವಿಧಿಸುವ ನಿಯಂತ್ರಣಗಳು, ಇವುಗಳಲ್ಲದೆ ಕ್ಲೇಶ ಮತ್ತು ಮಾನವ ದುರ್ಗುಣಗಳು ಜನಸಂಖ್ಯೆಯ ಎಲ್ಲೆ ಇಲ್ಲದ ವಿಸ್ತಾರವನ್ನು ತಡೆಗಟ್ಟುವುವು. ಮಾಲ್ತಸನ ಪ್ರಕಾರ ಕ್ಲೇಶವೆಂದರೆ, ಮನುಷ್ಯನ ಹಿಡಿತಕ್ಕೆ ನಿಲುಕದ ಪ್ರವಾಹ, ಭೂಕಂಪ, ಸಾಂಕ್ರಾಮಿಕ ರೋಗ, ಅನಾವೃಷ್ಟಿ. ದುರ್ಗುಣಗಳೆಂದರೆ ಮುಖ್ಯವಾಗಿ ಮನುಷ್ಯ ಯೋಜಿತ ಯುದ್ಧ. ಆದುದರಿಂದ ಮನುಷ್ಯ ತನ್ನಲ್ಲಿರುವ ಸಹಜವಾದ ಸಂತಾನಾಭಿವೃದ್ಧಿ ಪ್ರವೃತ್ತಿಯನ್ನು ಮಿತಗೊಳಿಸಬೇಕು. ಇಲ್ಲದೆ ಹೋದರೆ ಜನಸಂಖ್ಯೆ ಆಹಾರಮಿತಿಯನ್ನು ಮೀರಿ ಹಸಿವು ಕಾಯಿಲೆಗಳಿಗೆ ಅವಕಾಶ ಕೊಡುತ್ತದೆ. ತಾನು ನಿರೂಪಿಸಿದ ಜನಸಂಖ್ಯಾ ತತ್ತ್ವದ ದೃಷ್ಟಿಯಲ್ಲಿ, ಆಗಿನ ಇಂಗ್ಲೆಂಡಿನಲ್ಲಿ ಆಚರಣೆಯಲ್ಲಿದ್ದ ಧಾನ್ಯದ ಕಾನೂನುಗಳನ್ನು ಅವನು ತೀವ್ರವಾಗಿ ಟೀಕಿಸಿದ. ಆಗಿನ ಧಾನ್ಯದ ಕಾನೂನಿನ ಪ್ರಕಾರ ದೊಡ್ಡ ಬಡಕುಟುಂಬಗಳಿಗೆ ಧಾನ್ಯವನ್ನು ದಾನವಾಗಿ ಕೊಡಲಾಗುತ್ತಿತ್ತು. ಸಮಾಜದಲ್ಲಿರುವ ಯಾವ ದೋಷವನ್ನು ನಿವಾರಿಸಲು ಸರ್ಕಾರ ಯತ್ನಿಸುವುದೋ ಅದನ್ನು ಈ ಮೂಲಕ ಇನ್ನೂ ಉಲ್ಬಣಗೊಳಿಸುತ್ತದೆ ಎಂದು ವಾದಿಸಿದ. ಆಹಾರವನ್ನು ಕೊಟ್ಟರೆ ಜನಸಂಖ್ಯೆಯ ಅಭಿವೃದ್ಧಿ ವೇಗ ಹೆಚ್ಚುವುದೆಂದು ಆತನ ಅಭಿಪ್ರಾಯ. ಆದ್ದರಿಂದ ಇವನ ಪ್ರಬಂಧ ತೀವ್ರ ವಾಗ್ವಾದಕ್ಕೆ ಎಡೆಕೊಟ್ಟಿತು. ಆತನ ಮೇಲೆ ಬೈಗುಳಗಳ ಸುರಿಮಳೆಯಾಯಿತು. ಮಾಲ್ತಸ್ ಯಾವುದಕ್ಕೂ ಅಂಜದೆ ಜನಸಂಖ್ಯೆ ಆಹಾರೋತ್ಪತ್ತಿಗಳ ವಿಷಯಗಳಲ್ಲಿ ಅನೇಕ ದೇಶಗಳ ಅಂಕಿಅಂಶಗಳನ್ನು ಶೇಖರಿಸಿದ. ಐದು ವರ್ಷಗಳ ಸತತ ಕಾರ್ಯದ ಫಲವಾಗಿ ಅವನ ಪ್ರಬಂಧದ ಎರಡನೆಯ ಪರಿಷ್ಕøತ ಮುದ್ರಣ 1803ರಲ್ಲಿ ಪುಸ್ತಕದ ರೂಪದಲ್ಲಿ ಪ್ರಕಟವಾಯಿತು.

	ಈ ಎರಡನೆಯ ಮುದ್ರಣದಲ್ಲಿ ಮಾಲ್ತಸ್ ಮನುಷ್ಯ ತಾನೇ ವಿಧಿಸಿಕೊಳ್ಳಬಹುದಾದ ನೈತಿಕ ಸಂಯಮಕ್ಕೆ ಪ್ರಾಮುಖ್ಯ ಕೊಟ್ಟ. ಮನುಷ್ಯ ತನ್ನ ಸಂಯಮದಿಂದ ಪ್ರಕೃತಿಯ ಕಠಿಣ ನಿರ್ಬಂಧಗಳ ಆಚರಣೆಯನ್ನು ತಡೆಗಟ್ಟಲು ಸಾಧ್ಯವೆಂದು ತಿಳಿಸಿದ. ವಿವಾಹ ವಯಸ್ಸನ್ನು ಮುಂದೆ ಹಾಕುವುದು, ಲೈಂಗಿಕ ಸಂಯಮ - ಇವು ಮುಖ್ಯವಾದ ಎರಡು ಮಾರ್ಗಗಳೆಂದು ಮಾಲ್ತಸ್ ತಿಳಿಸಿದ. ಮನುಷ್ಯನ ಬದುಕು ಕೇವಲ ಜೀವಿಸುವುದಲ್ಲ. ಬದುಕು ಉತ್ತಮವಾದ ಜೀವನವಾಗಬೇಕು. ಈ ಉತ್ತಮ ಜೀವನಕ್ಕೆ ನೈತಿಕ ಸಂಯಮ ಸಹಕಾರಿಯಾಗುವುದೆಂದು ತಿಳಿಸಿದ. ಮಾಲ್ತಸನ ಪುಸ್ತಕದ ಆರನೆಯ ಮತ್ತು ಅಂತಿಮ ಆವೃತ್ತಿ 1826ರಲ್ಲಿ ಹೊರಬಿತ್ತು.

	ಒಟ್ಟಿನಲ್ಲಿ ಮಾಲ್ತಸ್ ಮನುಷ್ಯನ ಸಂತಾನಾಭಿವೃದ್ಧಿಯ ವಿಷಯದಲ್ಲಿ ಆಶಾದಾಯಕ ಸ್ಥಿತಿಯನ್ನು ಕಾಣಲಿಲ್ಲ. ಮನುಷ್ಯ ಯಾವಾಗಲೂ ಸಂಯಮದಿಂದ ವರ್ತಿಸಿ ಜನಸಂಖ್ಯೆಯನ್ನು ಅಂಕೆಯಲ್ಲಿ ಇಡುವನೆಂದು ಅವನು ಭಾವಿಸಿರಲಿಲ್ಲ. ಆದ್ದರಿಂದ ಮಾನವ ಸಮಾಜದಲ್ಲಿ ಆಗಿಂದಾಗ್ಗೆ ಪ್ರಕೃತಿ ತನ್ನ ಜನಸಂಖ್ಯಾ ನಿಯಂತ್ರಣ ನಿಯಮಗಳನ್ನು ನಿರ್ದಾಕ್ಷಿಣ್ಯವಾಗಿ ವಿಧಿಸುವುದೆಂದು ತಿಳಿಸಿದ.

	ಮಾಲ್ತಸ್ ನಿರೂಪಿಸಿದ ತತ್ತ್ವದಲ್ಲಿ ಕೆಲವು ನ್ಯೂನತೆಗಳು ಕಾಣುತ್ತವೆ. ಆರ್ಥಿಕಸ್ಥಿತಿ ಉತ್ತಮವಾದರೆ ಜನಸಂಖ್ಯೆ ಹೆಚ್ಚುತ್ತದೆ ಎಂಬುದು ಆತನ ಅಭಿಪ್ರಾಯ. ಆದರೆ ಇದು ಸರಿಯಲ್ಲ. ಆರ್ಥಿಕ ಸ್ಥಿತಿ ಉತ್ತಮವಾದಂತೆ ಜನಸಂಖ್ಯಾ ಬೆಳೆವಣಿಗೆಯ ಗತಿ ಮಂದವಾಗುತ್ತದೆ. ಎರಡನೆಯದಾಗಿ ಆತ ನಿರೂಪಿಸಿದ ಜ್ಯಾಮಿತಿಯ ಸಂಖ್ಯಾಶ್ರೇಣಿಯಲ್ಲಿ ಬೆಳೆಯುವ ಜನಸಂಖ್ಯೆ. ಇದು ಆತ ನಿರೂಪಿಸಿದ ತತ್ತ್ವದಲ್ಲಿ ಪ್ರಮುಖವಾದ ದೋಷವಲ್ಲ. ಆತ ಮುಖ್ಯವಾಗಿ ಪ್ರತಿಪಾದಿಸಿದ ತತ್ತ್ವ. ಜನಸಂಖ್ಯೆಯ ಏರಿಕೆ ಆಹಾರೋತ್ಪತ್ತಿಯ ಏರಿಕೆಗಿಂತಲೂ ಹೆಚ್ಚಾಗಿರುತ್ತದೆ ಎಂಬುದು ಸತ್ಯವಾಗಿರುವ ಅಂಶ. ಆತ ತಿಳಿಸಿದ ಜ್ಯಾಮಿತಿಯ ಶ್ರೇಣಿ, ಗಣಿತ ಶ್ರೇಣಿ ಕೇವಲ ಪ್ರಾಸಂಗಿಕವಾದುದು. ಏಷ್ಯದ ಅನೇಕ ರಾಷ್ಟ್ರಗಳ ಜನಸಂಖ್ಯೆಯನ್ನು ಪರಿಶೀಲಿಸಿದರೆ ಮಾಲ್ತಸ್ ಕೊಟ್ಟ ಎಚ್ಚರಿಕೆಯ ಅಪಾಯದ ವ್ಯಾಪ್ತಿ ಮನವರಿಕೆಯಾಗುತ್ತದೆ. ಆತ ನಿರೂಪಿಸಿದ ತತ್ತ್ವಗಳ ಆಧಾರದ ಮೇಲೆ ಕೆಲವು ಬದಲಾವಣೆಗಳನ್ನೊಳಗೊಂಡ ನವಮಾಲ್ತುಸಿಯನ್ನರ ಪಂಥ ಬೆಳೆಯಿತು.

	ಮಾಲ್ತಸನಲ್ಲಿ ಕೆಲವು ನ್ಯೂನತೆಗಳು ಅವನು ನಿರೂಪಿಸಿದ ತತ್ತ್ವದ ಸತ್ತ್ವವನ್ನು ಕಡೆಗಣಿಸುವಂತೆ ಮಾಡದು. ಜನಸಂಖ್ಯೆ ಮತ್ತು ಸಮಾಜದ ಪರಸ್ಪರ ಸಂಬಂಧವನ್ನು ವೀಕ್ಷಿಸುವ ನವೀನ ರೀತಿಯನ್ನು ಮಾಲ್ತಸ್ ನಿರೂಪಿಸಿದ.

	ಮಾಲ್ತಸನ ಪ್ರಭಾವವನ್ನು ಅರ್ಥಶಾಸ್ತ್ರದ ಬೆಳೆವಣಿಗೆಯಲ್ಲಿ ನಾವು ಕಾಣಬಹುದು. ಆತ ವಿವರಿಸಿದ ಗೇಣಿ ಮೌಲ್ಯದ ವಿಷಯ ಮುಖ್ಯವಾದುದು. ಸುಪ್ರಸಿದ್ಧ ಅರ್ಥಶಾಸ್ತ್ರಜ್ಞ ರಿಕಾರ್ಡೊ ಎಂಬಾತ ಮಾಲ್ತಸನ ಮಿತ್ರನಾಗಿದ್ದ. ರಿಕಾರ್ಡೊ ಪ್ರತಿಪಾದಿಸಿದ ದುಡಿಮೆಯ ಕ್ರಯದ ಆಧಾರದ ಮೇಲೆ ನಿರೂಪಿಸಲ್ಪಟ್ಟ ಮೌಲ್ಯತತ್ತ್ವವನ್ನು ಮಾಲ್ತಸ್ ವಿರೋಧಿಸಿದ.

	ಡಾರ್ವಿನ್ 1838ರಲ್ಲಿ ಮಾಲ್ತಸನ ಜನಸಂಖ್ಯೆ ಕುರಿತ ಸಿದ್ಧಾಂತವನ್ನು ಓದುತ್ತಿದ್ದಾಗ ಜೀವನಕ್ಕಾಗಿ ಹೋರಾಟ ಎಂಬ ಅಡಕನುಡಿ ಆತನಮೇಲೆ ಮುಖ್ಯವಾದ ಪರಿಣಾಮವನ್ನುಂಟು ಮಾಡಿತು. ಮುಂದೆ ಡಾರ್ವಿನ್ ನಿರೂಪಿಸಿದ ಸಸ್ಯಪ್ರಾಣಿ ವರ್ಗಗಳಲ್ಲಿ ಜೀವನಕ್ಕಾಗಿ ನಡೆಯುವ ಹೋರಾಟ ಸಿದ್ಧಾಂತಕ್ಕೆ ಇದು ಸಹಾಯಕವಾಯಿತು. ಹೀಗೆ ಮಾಲ್ತಸನ ಪ್ರಭಾವ ಬಹುಮುಖವಾಗಿತ್ತು. ಜನಸಂಖ್ಯೆಯ ಸಿದ್ಧಾಂತವೊಂದೇ ಅರ್ಥಶಾಸ್ತ್ರಕ್ಕೆ ಮಾಲ್ತಸನ ಕೊಡುಗೆಯಲ್ಲ. ಮಾಲ್ತಸ್ ಆರ್ಥಿಕ ಬೆಳೆವಣಿಗೆಯ ಸಿದ್ಧಾಂತಗಳನ್ನು ಕುರಿತು ಬರೆದಿರುವ ಅಸಾಮಾನ್ಯ ಬರೆಹಗಾರರಲೊಬ್ಬ. ಕೃಷಿಯ ಇಳಿಮುಖ ಪ್ರತಿಫಲ ನಿಯಮವನ್ನು ಪ್ರಪ್ರಥಮವಾಗಿ ರೂಪಿಸಿದವನೇ ಮಾಲ್ತಸ್. ಆರ್ಥಿಕ ಬೆಳೆವಣಿಗೆಯನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಸೂತ್ರಗಳನ್ನೂ ಮಾಲ್ತಸ್ ರೂಪಿಸಿದ್ದಾನೆ.

	ಧಾನ್ಯ ಕುರಿತ ಕಾನೂನುಗಳು, ಗೇಣಿಯ ಸ್ವರೂಪ ಹಾಗೂ ಪ್ರಗತಿ ಅರ್ಥಶಾಸ್ತ್ರದ ತತ್ತ್ವಗಳು ಇವನ್ನು ಕುರಿತು ಮಾಲ್ತಸ್ ಬರೆದಿದ್ದಾನೆ. ಮಾಲ್ತಸ್ 1834, ಡಿಸೆಂಬರ್ 23ರಂದು ನಿಧನನಾದ.	
	(ಎಚ್.ಎಂ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ